ದತ್, ತೋರುಲತ
	1856-1877. ಭಾರತದ ಕವಿಯಿತ್ರಿ. ಕಲ್ಕತ್ತದ ಶ್ರೀಮಂತ ಕುಟುಂಬಕ್ಕೆ ಸೇರಿದವಳು. 1862ರಲ್ಲಿ ಇವಳ ತಂದೆ ಗೋವಿಂದ ದತ್ ಕ್ರೈಸ್ತಮತವನ್ನು ಸ್ವೀಕರಿಸಿದ. ಆ ಕಾಲದ ಹಿಂದೂ ಸಮಾಜದ ದೋಷಗಳು, ದತ್ ಕುಟುಂಬದ ಸದಸ್ಯರಂಥ ಹಲವರು ಪ್ರಾಜ್ಞರೂ ಕ್ರೈಸ್ತಮತವನ್ನು ಅವಲಂಬಿಸಲು ಕಾರಣವಾದುವು. 1869ರಲ್ಲಿ ದತ್ ಸಂಸಾರ ಯೂರೋಪಿಗೆ ಪ್ರಯಾಣ ಮಾಡಿತು. ತೋರುಲತ ಮತ್ತು ಅವಳ ಅಕ್ಕ ಅರು ಫ್ರೆಂಚ್ ಶಾಲೆಯೊಂದರಲ್ಲಿ ಫ್ರೆಂಚ್ ಮತ್ತು ಇಂಗ್ಲಿಷ್ ಭಾಷೆಗಳನ್ನು ಅಭ್ಯಾಸ ಮಾಡಿದರು. ತಂದೆಯೂ ಕವನಗಳನ್ನು ಬರೆಯುತ್ತಿದ್ದ. 1871ರಿಂದ ಲತೆಗೆ ಇಂಗ್ಲೆಂಡಿನಲ್ಲಿ ವಿದ್ಯಾಭ್ಯಾಸವಾಯಿತು. 1873ರಲ್ಲಿ ಭಾರತಕ್ಕೆ ಹಿಂದಿರುಗಿದಾಗ ಸೋದರಿ ಅರು ಗತಿಸಿದಳು. ಲತ ತಂದೆಯೊಡನೆ ಸಂಸ್ಕøತ ಕಲಿತಳು. ಭಾರತಕ್ಕೆ ಬಂದವಳೇ, ತೋರುಲತ ಮಿತಿಮೀರಿ ಬೌದ್ಧಿಕ ಕಾರ್ಯಗಳಲ್ಲಿ ಮತ್ತು ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಳು. ಇದರಿಂದಾಗಿ ಅವಳ ಆರೋಗ್ಯ ಕುಸಿಯಿತು.

ತೋರುಲತ ಬಹು ಸೊಗಸಾಗಿ ಕಥೆಯನ್ನು ಹೇಳಬಲ್ಲಳು. ನಾಟಕೀಯ ದೃಶ್ಯಗಳನ್ನು ನಿರೂಪಿಸಬಲ್ಲಳು. ಓದುಗರ ಆಸಕ್ತಿಯನ್ನು ಸೆರೆ ಹಿಡಿಯುವಂತೆ ಕಥನವನ್ನು ನಿರ್ವಹಿಸಬಲ್ಲಳು. ಭಾರತದ ಕಥೆಗಳನ್ನು ಹೇಳುವಾಗ ಆಕೆ ಪಾತ್ರಗಳೊಡನೆ ಸ್ಪಂದಿಸುತ್ತಾಳೆ. ತನ್ನ ನಾಡಿನ ಸಾಂಸ್ಕøತಿಕ ಸಂಪತ್ತಿನಲ್ಲಿ ಕಳಕಳಿ ಇದ್ದ ಕವಿ ಇವಳು.		
	(ಎಚ್.ಎಸ್.ಎಸ್)

	ಲತ ಹಾಗೂ ಅರು ಇಬ್ಬರೂ ಮಾಡಿದ ಅನುವಾದಗಳು ಎ ಷೀಫ್ ಗ್ಲೀನ್ಡ್ ಇನ್ ಫ್ರೆಂಚ್ ಫೀಲ್ಡ್‍ಸ್ (1876) ಎಂಬ ಕೃತಿ ಜನಪ್ರಿಯವಾಯಿತು. ಇದು ಕೆಲವೇ ತಿಂಗಳಲ್ಲಿ ಎರಡನೆಯ ಮುದ್ರಣವನ್ನು ಕಂಡಿತು. (ಆದರೆ ಈ ಮುದ್ರಣ ಬೆಳಕು ಕಂಡಾಗ ತೋರುಲತ ಬದುಕಿರಲಿಲ್ಲ.) ಲಾವಣಿ ರೀತಿಯಲ್ಲಿ ರಚಿತವಾದ ಲಕ್ಷ್ಮಣ ಎಂಬ ಕವನದಲ್ಲಿ ಒಳ್ಳೆಯ ನಾಟಕೀಯ ಗುಣವಿದೆ. ಸೀತಾವನವಾಸ ಪ್ರಸಂಗವೇ ಇದರ ವಸ್ತು. ಹಿಂದೂಸ್ಥಾನದ ಪ್ರಾಚೀನ ನಾಡುಪದಗಳು ಮತ್ತು ಪುರಾಣ ಕಥೆಗಳು (1882) ಇನ್ನೊಂದು ಸಂಕಲನ. ಧ್ರುವ, ಏಕಲವ್ಯ, ಸಾವಿತ್ರಿ, ಪ್ರಹ್ಲಾದರಂಥ ಪೌರಾಣಿಕ ವ್ಯಕ್ತಿ ಶ್ರೇಷ್ಠರನ್ನಲ್ಲದೆ ದೇವತೆಗಳು ಮತ್ತು ರಾಕ್ಷಸರನ್ನೂ ಕಣ್ಣಿಗೆ ಕಟ್ಟುವಂತೆ ಲತ ಇದರಲ್ಲಿ ಚಿತ್ರಿಸುತ್ತಾಳೆ. ವೇದದ ಋಷಿಗಳು ಹಾಗೂ ವಾಲ್ಮೀಕಿ ಕಾಳಿದಾಸಾದಿಗಳ ರೀತಿಯಲ್ಲಿ ಅರ್ಥ ಪೂರ್ಣವೂ ಮರೆಯಲಾಗದಂಥವೂ ಆದ ಪ್ರತಿಮೆಗಳನ್ನು ಈಕೆ ಆಗಾಗ ಬಳಸುತ್ತಾಳೆ. ಹೊರಗಿನ ಜಗತ್ತಿನ ದೃಶ್ಯಗಳು ಮತ್ತು ವಸ್ತುಗಳನ್ನು ಕುರಿತ ಕವನಗಳು ನಿಸರ್ಗದೊಡನೆ ಇವಳಿಗಿದ್ದ ಆತ್ಮೀಯ ಭಾವೈಕ್ಯವನ್ನು ನಿರೂಪಿಸುತ್ತವೆ. ಸಣ್ಣ ಕೊಳವನ್ನೊಳಗೊಮಡ ಇವಳ ತೋಟ ಆದಿಯುಗದ ಈಡನ್ ವನದ ಸೊಗಸು ರಹಸ್ಯಗಳನ್ನು ತಾಳುತ್ತದೆ. ನಮ್ಮ ಸರ್ವೆಮರ ಎಂಬುದು ವರ್ಣನೆ, ಪರಿಭಾವನಗಳು ಬೆರೆತ ಉಜ್ವಲ ಕೃತಿ. ತೋರುಲತಳಂಥ ಪ್ರತಿಭಾನ್ವಿತ ಕವಿಯಿತ್ರಿಯೊಬ್ಬಳು ಅಕಾಲದಲ್ಲಿ ತನ್ನ 21ರ ಹರಯದಲ್ಲಿ ಕ್ಷಯಕ್ಕೆ ತುತ್ತಾದುದು ನಿಜಕ್ಕೂ ದುರದೃಷ್ಟದ ಸಂಗತಿ. 

	ತೋರುಲತಾಳ ಮರಣಾನಂತರ ಆಕೆಯ ಎರಡು ಫ್ರೆಂಚ್ ಕಾದಂಬರಿಗಳು ಬೆಳಕು ಕಂಡವು. ಒಂದು-ಲ ಜರ್ನಲ್ ದ ಮಾಡಮಜೆóಲ್ ದ ಅರ್ವರ್ಸ್ (1879). ಇದರಲ್ಲಿ ಈಕೆಯ ಸೋದರಿ ಅರುಳ ಚಿತ್ರಣವಿದೆ. ಎರಡನೆಯ ಅಪೂರ್ಣ ಕಾದಂಬರಿ ಬಿಯಾಂಕ ಆರ್ ದಿ ಯಂಗ್ ಸ್ಪ್ಯಾನಿಷ್ ಮೇಡನ್ (1878) ಎಂಬುದರ 8 ಅಧ್ಯಾಯಗಳು ಬೆಂಗಾಲ್ ಮ್ಯಾಗಜಿóೀನಿನಲ್ಲಿ ಅಚ್ಚಾಯಿತು.	 						
		(ಕೆ.ಎ.;ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ